This is the official site of Shree educational Institutions found By wellknown Journalist Shekar Ajekar.
Ahvana patrike a Newspaper sized Invitation created by shekara ajekar,.
Monday, October 12, 2009
ಶಿಕ್ಷಣ ಉದ್ಯೋಗಗಳನ್ನು ಸೃಷ್ಟಿಸುವ ಯಂತ್ರವಾಗುತ್ತಿದೆ- ಸುನೀಲ್
ಮೂಡುಬಿದಿರೆ : ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ
ಶಿಕ್ಷಣ ಉದ್ಯೋಗಗಳನ್ನು ಸೃಷ್ಟಿಸುವ ಯಂತ್ರವಾಗುತ್ತಿದೆ- ಸುನೀಲ್
ಮೂಡುಬಿದಿರೆ, ಅ. ೧೦ : ಶಿಕ್ಷಣ ಇಂದು ಕೇವಲ ಉದ್ಯೋಗಗಳನ್ನು ಸೃಷ್ಟಿಸುವ ಉತ್ಪಾದನಾ ಯಂತ್ರವಾಗುತ್ತಿದೆ. ಮಾನವೀಯ ಮೌಲ್ಯಗಳನ್ನು ರೂಢಿಸುವ ಕಾರ್‍ಯ ನಡೆಯುತ್ತಿಲ್ಲ ಎಂದು ಯುವ ಬರಹಗಾರ, ಕುಂದಾಪುರದ ಭಂಡಾರ್ಕಾರ್‍ಸ್ ಕಾಲೇಜಿನ ವಿದ್ಯಾರ್ಥಿ ಸುನೀಲ್ ಎಚ್.ಜಿ. ಬೈಂದೂರು ವಿಷಾದಿಸಿದರು.
ಮಿತ್ರಮಂಡಳಿ ಕೋಟ, ಶ್ರೀ ಕಾಲೇಜು ಮೂಡುಬಿದಿರೆ, ದ.ಕ. ಜಿಲ್ಲಾ ಕನ್ನಡ ಪರಿಷತ್ ಇವುಗಳ ಸಹಭಾಗಿತ್ವದಲ್ಲಿ ಮೂಡಬಿದಿರೆ ಸಮಾಜ ಮಂದಿರದಲ್ಲಿ ಡಾ| ಶಿವರಾಮ ಕಾರಂತರ ಸವಿನೆನಪಿನಲ್ಲಿ ಶನಿವಾರ ನಡೆದ ೧೪ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.
ಸಾಹಿತಿ, ಸಂಘಟಕ ಡಾ| ನಾ. ಮೊಗಸಾಲೆ ಅವರು ಸಮ್ಮೇಳನಾಧ್ಯಕ್ಷ ಸುನೀಲ್ ಅವರಿಗೆ ಶಾಲು ಹೊದೆಸಿ ಗೌರವಿಸುವ ಮೂಲಕ ಸಮ್ಮೇಳನವನ್ನು ವಿಶಿಷ್ಟವಾಗಿ ಉದ್ಘಾಟಿಸಿದರು.
ಪರಮಾಣು ಕುಟುಂಬ
ಅವಿಭಕ್ತ ಕುಟುಂಬ ಪದ್ದತಿ ಮಾಯವಾಗುತ್ತಾ ಪರಮಾಣು ಕುಟುಂಬದ ಸ್ವರೂಪ ಕಾಣುತ್ತಿರುವ ಇಂದಿನ ದಿನಗಳಲ್ಲಿ ವ್ಯಕ್ತಿ ಮತ್ತು ಪರಿವಾರದ ನಡುವಿನ ಸಂಬಂಧಗಳು ದುರ್ಬಲವಾಗುತ್ತಿವೆ. ಹಿಂದೆಲ್ಲ ಸಾಂಸ್ಕೃತಿಕ ಪಲ್ಲಟನಗಳು ಎಂಬುದು ದಶಕಗಳ ಅಂತರದಲ್ಲಾಗುತ್ತಿದ್ದರೆ, ಇಂದು ವರುಷದ ಅಂತರದಲ್ಲಿ ಆಗುತ್ತಿವೆ. ಈ ಸಂಕಟಮಯ ಸಂದರ್ಭ ನಾಳಿನ ಪ್ರಜೆಗಳಾದ ಮಕ್ಕಳಲ್ಲಿ, ಯುವ ಜನರಲ್ಲಿ ಅರಿವಿನ, ಬೆಳಕಿನ ಬೀಜಗಳನ್ನು ಬಿತ್ತುವ ಕಾರ್‍ಯ ಇಂಥ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನಗಳಿಂದ ಆಗುತ್ತಿದೆ ಎಂದ ಡಾ| ನಾ. ಮೊಗಸಾಲೆ, ಕಾರಂತರಂತೆ ಜಗತ್ತಿನ ಎಲ್ಲ ಸಂಗತಿಗಳ ಬಗ್ಗೆ ಆಸಕ್ತಿ, ನೇರನಡೆ, ನುಡಿ ಆಳವಾದ ವಿನಯ ರೂಢಿಸಿಕೊಳ್ಳಿ ಎಂದು ಯುವ ಜನರಿಗೆ ಕರೆ ನೀಡಿದರು.
ಶಾಸಕ, ವಿಧಾನಸಭಾ ವಿಪಕ್ಷೀಯ ಮುಖ್ಯ ಸಚೇತಕ ಕೆ. ಅಭಯಚಂದ್ರ ಅವರು, ಹಿರಿಯ ಪತ್ರಕರ್ತ ಪುತ್ತೂರಿನ ವಿ.ಬಿ. ಅರ್ತಿಕಜೆ ಅವರ ಪತ್ರಿಕಾರಂಗ ಪ್ರವೇಶ ಎಂಬ ಕೃತಿಯನ್ನು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಕ್ಷೇತ್ರಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಕೇರಳ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ರಾಜೇಶ್ ಆಳ್ವ ಭಾಗವಹಿಸಿದ್ದರು.
ಪಿಲಿಕುಳಕ್ಕೆ ಕಾರಂತ ಹೆಸರಿಡುವ ಆದೇಶ ಏನಾಯಿತು ?
ರಾಜ್ಯ ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಮಾತನಾಡಿ, ಪಿಲಿಕುಳ ನಿಸರ್ಗ ಧಾಮಕ್ಕೆ ಶಿವರಾಮ ಕಾರಂತರ ಹೆಸರನ್ನಿಡಬೇಕು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿ ೧೧ ವರ್ಷಗಳಾಗುತ್ತಾ ಬಂದಿದೆ. ಈ ಬಗ್ಗೆ ನಾವು ನಿರಂತರವಾಗಿ, ನಿನ್ನೆಯೂ ಜನಪ್ರತಿನಿಧಿಗಳಿಗೆ, ಸರಕಾರಕ್ಕೆ ಒತ್ತಾಯ ಮಾಡಿದ್ದು, ಇನ್ನೂ ಸರಕಾರಿ ಆದೇಶ ಜಾರಿಯಾಗಿಲ್ಲ. ಪಿಲಿಕುಳದ ಒಂದು ಭಾಗಕ್ಕೆ ಮಾತ್ರ ವನ್ಯಜೀವಿ ವಿಭಾಗ ಕಾರಂತರ ಹೆಸರಿಟ್ಟು ಹೊಣೆ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಸರಕಾರಿ ಆದೇಶ ಮೂಲೆಗುಂಪಾಗಿರುವ ಬಗ್ಗೆ ತೀವ್ರವಾಗಿ ಖಂಡಿಸಿದರು.
ಕೇರಳ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ರಾಜೇಶ್ ಆಳ್ವ ಅವರು, ರಾಮಚಂದ್ರ ಭಟ್ ಕಾಸರಗೋಡು ಅವರ ಕಾರಂತರ ಪುಸ್ತಕಗಳಲ್ಲಿ ಮುದ್ರಿತ ಕರಾವಳಿಯ ಕುರಿತಾದ ವೈವಿಧ್ಯಮಯ ಛಾಯಾಚಿತ್ರ ಪ್ರದರ್ಶನ ಮತ್ತು ಪತ್ರಿಕಾ ಪ್ರದರ್ಶನವನ್ನು ಉದ್ಘಾಟಿಸಿದರು.
ಎಸ್‌ಐಓ ರಾಜ್ಯಾಧ್ಯಕ್ಷ ಶೌಕತ್ ಆಲಿ ಅವರು, ಸರ್ವಧರ್ಮ ಸಮನ್ವಯ ಭಾರತದ ಮುನ್ನಡೆ ಎಂಬ ವಿಷಯದಲ್ಲಿ ಆಶಯ ಭಾಷಣ ಮಾಡಿದರು.
ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ. ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕುರಾ ಅವರು ಮಾತನಾಡಿ, ಆತ್ಮವಿಶ್ವಾಸ ಕಳಕೊಳ್ಳಬೇಡಿ. ಸಮಾಜ ಮುಖಿಯಾಗಿ ಬೆಳೆಯಿರಿ. ಒಳ್ಳೆಯತನದೊಂದಿಗೆ ಅನ್ಯಾಯವನ್ನು ಪ್ರತಿಭಟಿಸುವ ಶಕ್ತಿಯನ್ನು ಬೆಳೆಸಿಕೊಳ್ಳಿ - ಶಿವರಾಮ ಕಾರಂತರಂತೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗೌರವ : ೧೬ ಮಕ್ಕಳ ಧ್ವನಿ ಸಾಹಿತ್ಯ ಸಮ್ಮೇಳನಗಳ ಸಂಘಟಕ ಶ್ರೀನಿವಾಸ ರಾವ್ - ಸಾವಿತ್ರಿ ಶಿಕ್ಷಕ ದಂಪತಿಗೆ ಡಾ| ಕಾರಂತ ಸಾಹಿತ್ಯ ಸೇವಕ ಶ್ರೇಷ್ಠ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶ್ರೀ ಕಾಲೇಜ್ ಬಳಿಯಿಂದ ಹೊರಟ ಮೆರವಣಿಗೆಯನ್ನು ಪುರಸಭಾ ಸದಸ್ಯ ಮನೋಜ್ ಶೆಟ್ಟಿ ಉದ್ಘಾಟಿಸಿದರು.
ಮಿತ್ರ ಮಂಡಳಿ ಕೋಟದ ಅಧ್ಯಕ್ಷ ಎಚ್. ಶ್ರೀಧರ ಹಂದೆ ಅವರು ಶಿವರಾಮ ಕಾರಂತರ ಕುರಿತಾದ ಶೋಭಾನೆಯೊಂದಿಗೆ ಸ್ವಾಗತಿಸಿದರು.
ಸಂಘಟಕ, ಶ್ರೀ ಕಾಲೇಜ್ ಸಂಸ್ಥಾಪಕ ಶೇಖರ ಅಜೆಕಾರು ಅವರು ವೀಳ್ಯದೆಲೆ, ಅಡಿಕೆ, ಕರವಸ್ತ್ರ ನೀಡಿ ಅತಿಥಿಗಳನ್ನು ಪುರಸ್ಕರಿಸಿದರು. ಅಕ್ಷಯ್ ಜೈನ್ ಕಾರ್‍ಯಕ್ರಮ ನಿರೂಪಿಸಿದರು. ಶೇಖರ ಅಜೆಕಾರು ವಂದಿಸಿದರು.
ಕಾರಂತರ ಬರಹಗಳ ಕುರಿತು ವಿಚಾರಗೋಷ್ಠಿ, ಕಥಾಗೋಷ್ಠಿ ಡಾ| ಕಾರಂತ ವಿದ್ಯಾರ್ಥಿ ಪ್ರಶಸ್ತಿ ಪ್ರದಾನ, ಗೌರವ ಪುರಸ್ಕಾರ ಪ್ರದಾನ, ಸಮಾರೋಪ ನಡೆದವು. ಪ್ರೋ| ಸಿ. ಉಪೇಂದ್ರ ಸೋಮಯಾಜಿ, ಸಮ್ಮೇಳನ ಕಾರ್‍ಯದರ್ಶಿಗಳಾದ ವಿವೇಕ್ ಬಂಗೇರಾ, ಬವನ್, ಅಶ್ವಿನಿ ಆಚಾರ್ಯ, ಅಕ್ಷಯ್ ಜೈನ್ ಮತ್ತಿತ್ತರರು ಉಪಸ್ಥಿತರಿದ್ದರು.
Subscribe to:
Post Comments (Atom)
No comments:
Post a Comment