Ahvana patrike a Newspaper sized Invitation created by shekara ajekar,.

Monday, October 12, 2009

೧೪ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಭಾಷಣ:ಸುನೀಲ್ ಎಚ್.ಜಿ. ಬೈಂದೂರು


೧೪ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಭಾಷಣ
ಅಧ್ಯಕ್ಷತೆಯ ಮಾತುಗಳು ಎಂಬ ಹೆಸರುಳ್ಳ ಮಾತುಗಳನ್ನು ಕಿರಿಯನಾಗಿ ಸಾಹಿತ್ಯ ದಿಗ್ಗಜರೆದುರಲ್ಲಿ ಹಂಚಿಕೊಳ್ಳಬಯಸುತ್ತೇನೆ. ನನ್ನ ಮಾತುಗಳು ಆರಂಭಕ್ಕೂ ಮೊದಲು ಡಾ| ಶಿವರಾಮ ಕಾರಂತರನ್ನೊಮ್ಮೆ ನೆನಪಿಸಿಕೊಂಡು ಮುಂದುವರಿಯಬೇಕಾಗುತ್ತದೆ. ಇಲ್ಲವಾದರೆ ಅವರ ಸವಿನೆನಪಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ನಾನು ಭಾಗಿಯಾದುದ್ದಕ್ಕೆ ಅರ್ಥವಿರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ನಾನು ಕುಂದಾಪುರದಿಂದ ಇಲ್ಲಿಗೆ ಬಂದು ಅವರನ್ನು ನೆನಪಿಸಿಕೊಳ್ಳದಿದ್ದರೆ ನನ್ನ ಮಾತು ಸಾರ್ಥಕವೆನಿಸದು.
ಕಡಲತೀರದ ಭಾರ್ಗವ, ನಡೆದಾಡುವ ವಿಶ್ವಕೋಶ ಎಂಬಿತ್ಯಾದಿ ಬಿರುದುಗಳಿಂದ ಪ್ರಸಿದ್ದಿ ಪಡೆದಿದ್ದ ಕಾರಂತರದ್ದು ಒಂದು ವಿಶಿಷ್ಟವಾದ ವ್ಯಕ್ತಿತ್ವವೆಂದೇ ಹೇಳಬೇಕು. ಮನದಲ್ಲಿ ಕೆಚ್ಚು, ಸಾಧನೆಯ ಹುಚ್ಚು ಇರುವ ಪ್ರತಿ ವಿದ್ಯಾರ್ಥಿಗೂ ಕಾರಂತರು ಸ್ಫೂರ್ತಿಯ ಚೆಲುವೆಯೇ ಸರಿ. ವಿಶ್ವದ ಅದ್ಭುತಗಳೆಂದು ಏಳು ನಿರ್ಜೀವ ವಸ್ತುಗಳನ್ನು ಗುರುತಿಸಿದ್ದಾರೆ. ಒಂದು ವೇಳೆ ಜೀವಂತ ಇರುವವರನ್ನು ಆ ಪಟ್ಟಿಯಲ್ಲಿ ಸೇರಿಸುವುದಾದರೆ, ಆ ಯಾದಿಯಲ್ಲಿ ಕಾರಂತರದ್ದು ಮೊದಲ ಹೆಸರಾಗಿರುತ್ತಿತ್ತೆನೋ. ಕಾರಣ ಅವರ ಸಾಹಿತ್ಯವೇ ಒಂದು ಅದ್ಭುತ. ಇನ್ನೂ ಹೇಳಬೇಕೆಂದರೆ ಅವರೇ ಒಂದು ಅದ್ಭುತ ಪ್ರತಿಭೆ. ಎಲ್ಲಾ ಕ್ಷೇತ್ರದಲ್ಲಿಯೂ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದರು. ಕಾರಂತರ ಸಾಹಿತ್ತಿಕ ಹಾಗೂ ಖಾಸಗಿ ಬದುಕುಗಳೆರಡೂ ನಮಗೆ ಸ್ಫೂರ್ತಿ ತರುವಂತದ್ದು. ಇಂದು ಕಾರಂತರು ನಮ್ಮಿಂದ ದೂರವಾಗಿರಬಹುದು, ಆದರೆ ಅವರ ಜ್ಞಾನ ಸಂಪತ್ತು ಪ್ರತಿ ಯುವ ಬರಹಗಾರರ ಹೃದಯದಲ್ಲಿ ಅಚ್ಚಳಿಯದೇ ಉಳಿದಿದೆ. ಇದು ಬರಿ ಉತ್ಪ್ರೇಕ್ಷೆಯ ಮಾತುಗಳಲ್ಲ ಅವರ ಕೃತಿಗಳನ್ನು ಓದಿದ ಪ್ರತಿಯೊಬ್ಬರಿಂದಲೂ ಹೊರಡುವ ಮಾತುಗಳೆಂಬುದಂತೂ ಸತ್ಯ.
ಇನ್ನೂ . . . ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಎಂದ ಮೇಲೆ ಇಂದಿನ ಸಾಹಿತ್ಯದ ಸ್ಥಿತಿ, ಶಿಕ್ಷಣ ಹಾಗೂ ವಿದ್ಯಾರ್ಥಿ ಮಿತ್ರರುಗಳು ಒಂದಿಷ್ಟು ಹೇಳಬೇಕಾಗುತ್ತದೆ. ಇಂದಿನ ಪರಿಸ್ಥಿತಿಯನ್ನು ಗಮನಿಸಿದಾಗ ಸಾಹಿತ್ಯವೆಂಬುದು ಸೊರಗುತ್ತಿದೆಯೋ ? ಏನೋ ಎಂದು ನನಗನಿಸುತ್ತದೆ. ಯಾಂತ್ರಿಕೃತವಾಗುತ್ತಿರುವ ಬದುಕಿನ ನಡುವೆ ಸಾಹಿತ್ಯ ಕೃತಿಗಳನ್ನು ಆಸ್ವಾದಿಸುವ ಮನಗಳು ಮರೆಯಾಗುತ್ತಲಿವೆ ಎಂದರೆ ತಪ್ಪಾಗದೇನೋ. ಕಥೆ, ಕಾದಂಬರಿಗಳನ್ನು ಓದುವುದಕ್ಕಾಗಲಿ, ಕವನ ರಚಿಸುವುದಕ್ಕಾಗಲಿ ಸಮಯವೆಲ್ಲಿದೆ ಎಂಬುದು ನನ್ನ ಬಹಳಷ್ಟು ಮಿತ್ರರುಗಳಿಂದ ಕೇಳಿದ ಮಾತು. ಇದು ಒಂದಿಷ್ಟು ವರ್ಗದ ಕಥೆಯಾದರೆ, ಮತ್ತೊಂದಿಷ್ಟು ಜನ ಪಠ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳತ್ತ ತಲೆಹಾಕುವುದೇ ಇಲ್ಲ. ಒಂದು ಥರವಾಗಿ ನೋಡಿದರೆ ನಮ್ಮ ಶಿಕ್ಷಣವೇ ಅಂತಹದ್ದು. ಅದು ಕೇವಲ ಉದ್ಯೋಗಿಗಳನ್ನು ಸೃಷ್ಟಿಸುವ ಉತ್ಪಾದನಾ ಯಂತ್ರವಾಗಿದೆಯೇ ಹೊರತು, ಮಾನವೀಯ ಮೌಲ್ಯಗಳನ್ನು ಬೋಧಿಸುವ ಸಂಸ್ಕೃತಿಯ ಕೇಂದ್ರವಾಗಿ ಉಳಿದಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಈ ಸಾಹಿತ್ಯ, ಸಂಸ್ಕೃತಿಯ ಅಗತ್ಯವೇ ಕಂಡುಬರುವುದಿಲ್ಲ. ಕಾರಣ ಇಷ್ಟೇ ತಾನು ಕಲಿತಾದ ಮೇಲೆ ತನಗೆ ಯಾವ ಉದ್ಯೊಗ ದೊರೆಯುತ್ತದೆ ಎಂಬುದರ ಕಡೆಗೆ ಬಹುತೇಕ ವಿದ್ಯಾರ್ಥಿ ಮಿತ್ರರುಗಳ ಗಮನವಿರುತ್ತದೆ. ಈ ಎಲ್ಲದರ ನಡುವೆ ಸಾಹಿತಯಾಸಕ್ತರಾದ ನಾವು ಬದುಕುತ್ತಿದ್ದೇವೆ. ಈ ತರನಾದಂತಹ ಅಹಿತಕರ ಪರಿಸ್ಥಿತಿ ದೂರವಾಗಬೇಕಾದರೆ ಇಂತಹ ವೇದಿಕೆಗಳು ಅವಶ್ಯಕವಾಗುತ್ತವೆ. ಇಂತಹ ಕಾರ್ಯಕ್ರಮಗಳಿಂದ ಮಾತ್ರ ವಿದ್ಯಾರ್ಥಿಗಳನ್ನು ಹುರಿದುಂಬಿಸಲು ಸಾಧ್ಯ ಎಂಬುದು ನನ್ನ ಅಭಿಪ್ರಾಯ. ಅರಳಿ ಮರೆಯಾಗುವ ಪ್ರತಿಭೆಗಳನ್ನು ಶೋಧಿಸಿ ಗುರುತಿಸುವ ಕಾರ್ಯಕ್ರಮವನ್ನು ಈ ಸಂಘಟನೆ ಮಾಡಿದೆ. ನಿಜವಾಗಲೂ ಇದೊಂದು ಶ್ಲಾಘನೀಯ ವಿಚಾರವೇ. ಇದು ಬರಿ ಪ್ರತಿಭೆಯನ್ನು ಗುರುತಿಸುವ ಕಾರ್ಯ ಮಾತ್ರವಲ್ಲ ಸಾಹಿತ್ಯ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಬಗೆಯೂ ಹೌದೆನಿಸುತ್ತದೆ. ಯಾವುದೇ ವ್ಯಕ್ತಿ ಇರಲಿ ತನ್ನ ವೃತ್ತಿಯೊಂದಿಗೆ ಪ್ರವೃತ್ತಿಯನ್ನು ಕೂಡ ಅಭಿವ್ಯಕ್ತಗೊಳಿಸಿದಾಗ ಮಾತ್ರ ಆತನ ಬದುಕು ಪರಿಪೂರ್ಣತೆಯನ್ನು ಕಂಡುಕೊಳ್ಳಲು ಸಾಧ್ಯ.
ಒಂದು ಸಾಹಿತ್ಯ ಬೆಳೆಯಬೇಕೆಂದರೆ ಮೊದಲು ಭಾಷೆ ಅಭಿವೃದ್ಧಿಯಾಗಿರಬೇಕು. ಭಾಷೆ ಬೆಳೆಯಬೇಕಾದರೆ ಆ ಭಾಷೆಯನ್ನಾಡುವ ಜನ ಆ ಭಾಷೆಯ ಬಗ್ಗೆ ಅಭಿಮಾನ ಹೊಂದಿರಬೇಕು ಜೊತೆಗೆ ಮಾತೃಭಾಷೆಯನ್ನು ಉಳಿಸಿಕೊಳ್ಳುವ ಛಲವೂ ಇರಬೇಕು. ಇಂದು ಕನ್ನಡ ಭಾಷೆ ಮತ್ತು ಸಾಹಿತ್ಯಗಳೆರಡೂ ಬೆಳೆದಿವೆ


ಆದರೆ ಭಾಷಾಭಿಮಾನ ಎನ್ನುವುದು ಮಾತ್ರ ದೂರದ ಮಾತಾಗಿ ಹೋಗಿದೆ. ಕನ್ನಡ ಭಾಷಿಕರು ಎಂದರೆ ಕೀಳಾಗಿ ಕಾಣುವವರು ಕೂಡ ಕಾಣಸಿಗುತ್ತಾರೆ. ನನ್ನ ಪ್ರಕಾರ ಯಾವ ಭಾಷೆಯೂ ಕೀಳಲ್ಲ, ಮೇಲೂ ಅಲ್ಲ. ಆದರೂ ಕೂಡ ಜನಿಸಿದ ನಾಡಿನ ಭಾಷೆಯನ್ನು ಅಭಿಮಾನಿಸುವುದು ಪ್ರತಿಯೊಬ್ಬನ ಕರ್ತವ್ಯವಾಗಿರುತ್ತದೆ. ಹಾಗಂದ ಮಾತ್ರಕ್ಕೆ ಇತರ ಭಾಷೆಗಳನ್ನು ಬಳಸಬಾರದೆಂದು ನಾನೆಂದೂ ಹೇಳುವುದಿಲ್ಲ. ಮಾತೃಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಿ ಎಂದು ಮಾತ್ರ ನಾನು ಹೇಳಬಲ್ಲೆ. ಈ ಕಾರ್ಯವನ್ನು ಪ್ರತಿಯೊಬ್ಬ ಕನ್ನಡಿಗನು ಮನಪೂರ್ವಕವಾಗಿ ಮಾಡಬೇಕಾಗಿದೆ. ಬದಲಾಗಿ ಭಾಷೆಯನ್ನು ಉಳಿಸಿ ಬೆಳೆಸಿ ಎಂದು ಹೋರಾಟ ಮಾಡಿ ಸಾಮಾಜಿಕ ಶಾಂತಿಗೆ ಭಂಗತರುವುದರಿಂದ ಸಾಧ್ಯವಿಲ್ಲ. ಪರರ ಸಂಸ್ಕೃತಿಯನ್ನು ಪ್ರೀತಿಸು, ನಿನ್ನ ಸಂಸ್ಕೃತಿಯಲ್ಲಿ ಬದುಕು ಎಂಬ ಗಾಂಧೀಜಿಯವರ ಹಿತನುಡಿ ಇಲ್ಲಿ ಪ್ರಸ್ತುತವೆನಿಸುತ್ತದೆ.
ಇನ್ನು ವಿದ್ಯಾರ್ಥಿ ಸಂಬಂಧಿತ ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಒಂದೆರಡಿಲ್ಲ. ಸರಕಾರಿ ವಿದ್ಯಾ ಸಂಸ್ಥೆಗಳಲ್ಲಿ ಉಪನ್ಯಾಸಕರ ಕೊರತೆ ಹಾಗೂ ಮೂಲ ಸೌಕರ್ಯಗಳ ಕೊರತೆ ಸಾಮಾನ್ಯವಾಗಿ ಎದ್ದು ಕಾಣುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಈ ಎಲ್ಲವನ್ನೂ ಪೂರೈಸಕೊಂಡು ಸೂಕ್ತ ಶಿಕ್ಷಣವನ್ನೇನೋ ನೀಡುತ್ತಿವೆ. ಆದರೆ ಶಿಕ್ಷಣವೆನ್ನುವುದು ಮಾತ್ರ ವ್ಯವಹಾರಿಕವಾಗಿಯೇ ಉಳಿದುಬಿಟ್ಟಿದೆ. ಉದ್ಯೋಗಕ್ಕಾಗಿ ಶಿಕ್ಷಣವಲ್ಲ, ಬಾಳುವುದಕ್ಕಾಗಿ ಶಿಕ್ಷಣವೆಂಬ ವಾತಾವರಣವಿಂದು ನಿರ್ಮಾಣವಾಗಬೇಕಿದೆ. ಅಂದರೆ ನಮ್ಮ ಶಿಕ್ಷಣ ವ್ಯವಸ್ಥೆಯೇ ಬದಲಾಗಬೇಕಿದೆ. ಪರೀಕ್ಷೆಯನ್ನು ಎದುರಿಸುವುದಕ್ಕಾಗಿ ಕಲಿಕೆಯಾಗಬಾರದು, ಬಾಳುವುದಕ್ಕಾಗಿ ಕಲಿಕೆ ಇರಬೇಕು. ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳನ್ನು ತೊಡಗಿಸುವಂತಹ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸಬೇಕೆಂಬ ನಿಯಮವನ್ನೇನೋ ತಂದಿದೆ ಆದರೆ ಅದೆಷ್ಟು ಅನುಷ್ಠಾನಗೊಳ್ಳುತ್ತಿದೆ ಎಂಬುದನ್ನು ಕೂಡ ವಿಚಾರ ಮಾಡಬೇಕಾಗಿದೆ. ಶೈಕ್ಷಣಿಕ ಸಂಸ್ಥೆಗಳು ಈ ನಿಯಮವನ್ನು ವಿಶಿಷ್ಟ ರೀತಿಯಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕಾಗಿದೆ. ಇನ್ನೂ ಶಿಕ್ಷಣೇತರ ವಿದ್ಯಾರ್ಥಿ ಸಮಸ್ಯೆಗಳೆಂದಾಗ ಮೊದಲು ರ್‍ಯಾಗಿಂಗ್‌ನ ನೆನಪಾಗುತ್ತದೆ. ರ್‍ಯಾಗಿಂಗ್ ಎನ್ನುವುದು ವಿಕೃತ ಮನಸ್ಥಿತಿಯೋ, ಚಂಚಲತೆಯೋ ಹಣ-ಜನಬಲದಿಂದ ಉದಯಿಸಿದ ಅಹಂ ಭಾವವೋ ಗೊತ್ತಿಲ್ಲ. ಆದರೆ ಅಮಾಯಕ ವಿದ್ಯಾರ್ಥಿಗಳ ಪಾಲಿಗೆ ಅಂಟಿದ ಭಯಾನಕ ಪಿಡುಗೆಂಬುದು ಮಾತ್ರ ನಿಜ. ಇದರ ವಿರುದ್ದ ಪ್ರಬಲವಾದ ಕಾನೂನುಗಳಿದ್ದರೂ ಕೂಡ ಪ್ರಯೋಜನವಾಗದೇ ಇರುವುದು ದುರದೃಷ್ಟಕರ ಸಂಗತಿ. ಶಿಕ್ಷಣ ಸಂಸ್ಥೆಗಳು ಹಾಗೂ ಸರಕಾರ ಈ ಬಗ್ಗೆ ಮತ್ತಷ್ಟು ಗಂಭೀರವಾಗಿ ಚಿಂತಿಸುವ ಅಗತ್ಯತೆ ಇದೆ. ವಿದ್ಯಾರ್ಥಿ ಸಂಘಟನೆಗಳೂ ಕೂಡ ಇದರ ವಿರುದ್ದ ಧ್ವನಿ ಎತ್ತಬೇಕಾಗಿದೆ. ಆದರೆ ಇಂದು ಯಾವ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಗಳ ನೆರವಿಗಾಗಿ ಇರಬೇಕಿತ್ತೊ ಅದೇ ಸಂಘಟನೆಗಳಿಂದು ವಿದ್ಯಾರ್ಥಿಗಳಲ್ಲಿ ಕೋಮು ಭಾವನೆ ಮತ್ತು ಧರ್ಮ ಭೇದವನ್ನು ಬಿತ್ತುತ್ತಿವೆ ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ರಾಜಕೀಯ ಪಕ್ಷದ, ಮತ ಧರ್ಮದ ಪ್ರತಿನಿಧಿಯಂತೆ ವರ್ತಿಸುತ್ತಿವೆ. ವಿದ್ಯಾರ್ಥಿ ಸಂಘಟನೆಗಳೆಂಬುದು ಅಧಿಕಾರ, ಪ್ರತಿಷ್ಠೆಗಾಗಿಯೋ ಅಥವಾ ಅವರ ಹಿತರಕ್ಷಣೆಗಾಗಿಯೋ ಎಂಬ ಜಿಜ್ಞಾಸೆ ಮೂಡುತ್ತಿದೆ. ಯುವಕರ ಕೆರಳಿಕೆ, ಹೋರಾಟ ಎಂಬುದು ಬೌದ್ಧಿಕ, ಸಾಂಸ್ಕೃತಿಕ, ಶೈಕ್ಷಣಿಕ ದಾಸ್ಯವನ್ನು ತೊಲಗಿಸುವಲ್ಲಿ ವಿನಿಯೋಗವಾಗಬೇಕೆ ಹೊರತು ಜಾತಿ, ಮತ, ದ್ವೇಷಗಳನ್ನು ಬೆಳೆಸುವಲ್ಲಿ ಕಾರಣವಾಗಬಾರದು.
ಅದೇನೆ ಇರಲಿ ನಾವು ಮಾತ್ರ ವಿದ್ಯಾರ್ಥಿಯಾಗಿಯೇ ಇರುವ ಶಿಕ್ಷಣವನ್ನು ಪಡೆಯುವ ವಿದ್ಯಾರ್ಥಿ ಮಾತ್ರವಾಗಿರದೇ ಬದುಕಬೇಕೆಂಬ ಗುರುವಿನ ವಿದ್ಯಾರ್ಥಿಯಾಗುವ ಹಿರಿಯರು ಸಮೃದ್ಧವಾಗಿ ಬೆಳೆಸಿಕೊಂಡು ಬಂದ ಸಾಹಿತ್ಯವನ್ನು ಮತ್ತಷ್ಟು ಅರಗಿಸಿಕೊಂಡು ಸಮಾಜಕ್ಕೆ ಹೊಸದೊಂದನ್ನು ನೀಡುವ ಹಿರಿಯರೆದುರು ಕಿರಿಯರಾಗಿ, ಕಿರಿಯರಿಗೆ ಮಾದರಿಯಾಗಿ, ನೊಂದವರಿಗೆ ಬೆಳಕಾಗಿ ಬಾಳುವ ಸಮಾಜದ ದಿಕ್ಕೆಡಿಸುವ ದುಷ್ಟ ಶಕ್ತಿಗಳ ಸದೆಬಡಿಯಲು ಲೇಖನಿಯೆಂಬ ಅಸ್ತ್ರವನ್ನು ಮತ್ತಷ್ಟು ಹರಿತವಾಗಿಸಬೇಕು.
ಸುನೀಲ್ ಎಚ್.ಜಿ. ಬೈಂದೂರು ಪ್ರಥಮ ಬಿ.ಬಿ.ಎಮ್. ಭಂಡಾರ್ಕರ್‍ಸ್ ಕಾಲೇಜ್ ಕುಂದಾಪುರ (

No comments: